ಚಿತ್ರಾಲ್ -
	ಪಾಕಿಸ್ತಾನದ ವಾಯುವ್ಯ ಗಡಿ ಪ್ರಾಂತ್ಯದಲ್ಲಿ ಮಾಲಕಂಡ್ ವಿಭಾಗದಲ್ಲಿರುವ ಒಂದು ಜಿಲ್ಲೆ ; ಆ ಜಿಲ್ಲೆಯ ಆಡಳಿತ ಕೇಂದ್ರ ; ಹಿಂದೂ ಕುಷ್ ಪರ್ವತದಲ್ಲಿ ಹುಟ್ಟಿ ಈ ಜಿಲ್ಲೆಯ ದಕ್ಷಿಣಾಭಿಮುಖವಾಗಿ ಹರಿದು 300 ಮೈ. ಸಾಗಿ ಕಾಬೂಲ್ ನದಿಯನ್ನು ಸೇರುವ ಒಂದು ನದಿ. ಉತ್ತರ ಪಶ್ಚಿಮಗಳಲ್ಲಿ ಆಫ್ಘಾನಿಸ್ತಾನ, ಪೂರ್ವಕ್ಕೆ ಕಾಶ್ಮೀರದ ಗಿಲ್ಗಿಟ್, ದಕ್ಷಿಣ ಮತ್ತು ಆಗ್ನೇಯಗಳಲ್ಲಿ ಡಿರ್ ಮತ್ತು ಸ್ವಟ್ ಜಿಲ್ಲೆಗಳು ಇದರ ಮೇರೆಗಳು. ಉತ್ತರದಲ್ಲಿ ಆಫ್ಘಾನಿಸ್ಥಾನದ ವಾಕಾನ್ ಕಣಿವೆಯಿಂದಾಗಿ ಇದು ಸೋವಿಯತ್ ಒಕ್ಕೂಟದಿಂದ ಬೇರ್ಪಟ್ಟಿದೆ. ಆದ್ದರಿಂದ ಇದು ಆಯಕಟ್ಟಿನ ಪ್ರದೇಶ. ಹಿಂದೂಕುಷ್ ಪರ್ವತದ ತಪ್ಪಲಲ್ಲಿ, ಸಮುದ್ರಮಟ್ಟದಿಂದ 5,000'-15,000'. ಎತ್ತರದಲ್ಲಿರುವ ಈ ಜಿಲ್ಲೆಯ ವಿಸ್ತೀರ್ಣ 5,727 ಚ. ಮೈ. ಜನಸಂಖ್ಯೆ 1,13,057 (1961). ಹಿಮಾಚ್ಛಾದಿತ ಪರ್ವತ ಶ್ರೇಣಿಗಳಿಂದ, ದೇವದಾರು ವೃಕ್ಷಗಳ ಕಾಡುಗಳಿಂದ, ರಮಣೀಯವಾದ ಕಣಿವೆಗಳಿಂದ ಕೂಡಿದ ಚಿತ್ರಾಲ್ ಸುಂದರವಾದ ಪ್ರದೇಶ. ಕಣಿವೆಗಳು ತುಂಬ ಫಲವತ್ತಾಗಿವೆ. ಗೋಧಿ, ಬಾರ್ಲಿ, ಮುಸುಕಿನ ಜೋಳ, ಬತ್ತ ಮುಖ್ಯ ಬೆಳೆಗಳು, ಹಣ್ಣುಗಳು, ದ್ರಾಕ್ಷಿ, ಉಪ್ಪುನೇರಿಳೆ- ಇವು ಇತರ ಉತ್ಪನ್ನಗಳು. ಇಲ್ಲಿ ಕಬ್ಬಿಣ ಅದುರು, ಸೀಸ, ತಾಮ್ರ, ಮ್ಯಾಂಗನೀಸ್ ಮತ್ತು ಆಂಟಿಮನಿ ನಿಕ್ಷೇಪಗಳಿವೆ. ಕೃಷಿಯನ್ನು ಬಿಟ್ಟರೆ, ಕತ್ತಿ ಮತ್ತು ಜಮಾಖಾನೆ ತಯಾರಿಕೆ, ಮತ್ತು ಕಸೂತಿ ಕೆಲಸ ಮುಖ್ಯ ಕಸುಬುಗಳು. ಚಿತ್ರಾಲ್ ಜಿಲ್ಲೆಯ ಜನ ಬಹುತೇಕ ಖೋ ಬುಡಕಟ್ಟಿನವರು. ಇವರ ಭಾಷೆ ಖೋವಾರ್ ಅಥವಾ ಚಿತ್ರಾಲಿ. ಇವರು ಆಕ್ಸಸ್ ಪ್ರದೇಶದಿಂದ ಇಲ್ಲಿಗೆ ಬಂದವರೆಂದು ನಂಬಲಾಗಿದೆ. ಇಲ್ಲಿಯ ಮೂಲ ವಾಸಿಗಳು ಅಲ್ಪಸಂಖ್ಯಾತರು. ಅವರು ಅಲ್ಲಲ್ಲಿ ಚದರಿ ಹೋಗಿದ್ದಾರೆ.

	ಜಿಲ್ಲೆಯ ಮುಖ್ಯಪಟ್ಟಣ ಚಿತ್ರಾಲ್. ಇದು ಪೆಷಾವರಿಗೆ ಉತ್ತರದಲ್ಲಿ 128 ಮೈ. ದೂರದಲ್ಲಿ. ಚಿತ್ರಾಲ್ ನದಿಯ ದಡದ ಮೇಲೆ. 2 ಮೈ. ಗಳಿಗಿಂತ ಕಿರಿದಾದ ಕಣಿವೆಯಲ್ಲಿ ಇದೆ. ನೌಷೇರದಿಂದ ಇಲ್ಲಿಗೆ ಮರ್ದಾನ್, ಮಾಲಕಂಡ್, ಡಿರ್ ಮತ್ತು ಲೋವರಾಯ್ ಕಣಿವೆ ದಾರಿಯ ಮೂಲಕ ರಸ್ತೆಯಿದೆ. ಈ ರಸ್ತೆ ಬೇಸಗೆಯಲ್ಲಿ ಮಾತ್ರ ಸಂಚಾರಯೋಗ್ಯ. ಚಿತ್ರಾಲ್‍ಗೂ ಗಿಲ್ಗಿಟ್‍ಗೂ ಷಂಡೂರ್ ಕಣಿವೆಯ ಮೂಲಕ ಸಂಪರ್ಕ ಸಾಧ್ಯ. ಚಿತ್ರಾಲ್‍ಗೂ ಪೆಷಾವರಿಗೂ ವಿಮಾನ ಸಂಪರ್ಕವಿದೆ.

	ಕ್ರಿ.ಪೂ. 1ನೆಯ ಶತಮಾನದಲ್ಲಿ ಈ ಪ್ರದೇಶ ಚೀನೀಯರ ಅಧೀನಕ್ಕೆ ಬಂತೆಂದೂ ಅನಂತರ ಹಲವು ಶತಮಾನಗಳ ಕಾಲ ಅವರು ಇಲ್ಲಿ ಆಳುತ್ತಿದ್ದರೆಂದೂ ಹೇಳಲಾಗಿದೆ. ಆಫ್ಘಾನಿಸ್ಥಾನದಿಂದ ಮುಸ್ಲಿಮರೂ ಇಲ್ಲಿಗೆ 11ನೆಯ ಶತಮಾನದಲ್ಲಿ ಬಂದರು. ಭಾರತ ಸ್ವತಂತ್ರವಾಗುವುದಕ್ಕೆ ಮುಂಚೆ ಈ ಪ್ರದೇಶ ಒಂದು ದೇಶೀಯ ಸಂಸ್ಥಾನವಾಗಿತ್ತು. ಇದನ್ನಾಳುತ್ತಿದ್ದ ದೊರೆ ಮೊಗಲ್ ಚಕ್ರವರ್ತಿ ಬಾಬರನ ಮೊಮ್ಮಕ್ಕಳಲೊಬ್ಬನಾದ ಬಾಬಾ ಅಯೂಬನ ವಂಶದವನೆಂದೂ ಬಾಬಾ ಅಯೂಬ್ ಇಲ್ಲಿಗೆ 17 ನೆಯ ಶತಮಾನದಲ್ಲಿ ಬಂದು ಇಲ್ಲಿಯ ದೊರೆಯ ಅಧಿಕಾರಿಯಾದನೆಂದೂ ಮುಂದೆ ಬಾಬಾ ಅಯೂಬನ ಮರಿಮಗ ಈ ಪ್ರದೇಶದಿಂದ ಅಧಿಪತಿಯಾದನೆಂದೂ ಹೇಳಲಾಗಿದೆ. ಬ್ರಿಟಿಷರು 1889 ರಲ್ಲಿ ಗಿಲ್ಗಿಟ್‍ನಲ್ಲಿ ತಮ್ಮ ಸೈನ್ಯವೊಂದನ್ನು ನೆಲೆಗೊಳಿಸಿ ಈ ಪ್ರದೇಶದ ದೊರೆಯನ್ನು ತಮ್ಮ ಆಶ್ರಿತನನ್ನಾಗಿ ಮಾಡಿಕೊಂಡರು. 1947 ರಲ್ಲಿ ಭಾರತ ವಿಭಜನೆಯಾಗಿ ಪಾಕಿಸ್ತಾನ ನಿರ್ಮಾಣವಾದ ಮೇಲೆ ಇಲ್ಲಿಯ ದೊರೆ ಸ್ವತಂತ್ರವಾದ. ಸಂಸ್ಥಾನ ಪಾಕಿಸ್ತಾನಕ್ಕೆ ಸೇರಿಕೊಂಡಿತು. 			*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ